KidsOut World Stories

ಊಸರವಳ್ಳಿಯ ಶಾಪ Deepa Nadig    
Previous page
Next page

ಊಸರವಳ್ಳಿಯ ಶಾಪ

A free resource from

Begin reading

This story is available in:

 

 

 

 

ಊಸರವಳ್ಳಿಯ ಶಾಪ

 

 

 

 

 

 

 


ಬ್ರಹ್ಮ ಸೃಷ್ಟಿಯನ್ನು ಪೂರ್ತಿಗೊಳಿಸಿದ ನಂತರ, ಕುಳಿತುಕೊಂಡು ತಾನು ಮಾಡಿದ ಸೃಷ್ಟಿಯನ್ನು ಅವಲೋಕಿಸಿದ. ಆತನಿಗೆ ತನ್ನ ಸೃಷ್ಟಿಯಲ್ಲಿ ಮನುಷ್ಯರ ಬಗ್ಗೆ ಹೆಚ್ಚಿನ ಸಂತೋಷ ಉಂಟಾಗಿತ್ತು. ಆದರೆ ಸಮಯ ಕಳೆದಂತೆ ಗಂಡಸರು ಮತ್ತು ಹೆಂಗಸರು ತಮ್ಮ ದೇಹಕ್ಕೆ ಗಾಯ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದನು. ಸಮಯ ಕಳೆದಂತೆ ಚರ್ಮದ ಮೇಲಿನ ಗಾಯ ಮಾಯುತ್ತಿತ್ತಾದರೂ ಅದು ಕಲೆ ಉಳಿಸುತ್ತಿತ್ತು. ಕೆಲವು ವರ್ಷಗಳ ನಂತರ ಅವರ ದೇಹ ವಯಸ್ಸಾದಂತೆ ಕಾಣುತ್ತಿತ್ತು ಮತ್ತು ಇದನ್ನು ಗಮನಿಸಿದ ಬ್ರಹ್ಮದೇವರು ಮನುಷ್ಯರಿಗೆ ಹೊಸ ಚರ್ಮವನ್ನು ನೀಡುವ ಬಗ್ಗೆ ಆಲೋಚಿಸಿದನು.
ಆತ ಊಸರವಳ್ಳಿಯನ್ನು ಕರೆದು ಹೀಗೆ ಹೇಳಿದನು “ಎಲ್ಲ ಗಂಡಸರು ಮತ್ತು ಹೆಂಗಸರಿಗೆ ನನ್ನ ಉಡುಗೊರೆಯೊಂದಿದೆ. ನೇರವಾಗಿ ಹೋಗು ಮತ್ತು ನಾನು ನೀಡಿರುವ ಪೊಟ್ಟಣವನ್ನು ಅವರಿಗೆ ತಲುಪಿಸು” ಎಂದು ಹೇಳಿ ಊಸರವಳ್ಳಿಗೆ ಚಿಕ್ಕ ಪೊಟ್ಟಣವೊಂದನ್ನು ನೀಡಿದನು.

ಆ ದಿನಗಳಲ್ಲಿ ಊಸರವಳ್ಳಿಗಳು ಮಿಂಚಿನ ವೇಗದಲ್ಲಿ ಸಂಚರಿಸುತ್ತಿದ್ದವು, ಹಾಗಾಗಿ ದೇವರು ನೀಡಿದ ಪೊಟ್ಟಣ ತಲುಪಿಸಲು ತಕ್ಷಣವೇ ಹೊರಟಿತು. ವೇಗದಿಂದ ಭೂಮಿಯತ್ತ ಊಸರವಳ್ಳಿಯು ಬರುತ್ತಿರುವಂತೆಯೇ ಪೊಟ್ಟಣವು ಊಸರವಳ್ಳಿಯ ತೋಳಿನಡಿಯಲ್ಲಿ ಸರಿಯಾಗಿ ಸೇರಿಕೊಂಡಿತ್ತು. ದಾರಿಯಲ್ಲಿ ನದಿಯೊಂದನ್ನು ಕಂಡಾಗ ಊಸರವಳ್ಳಿ ನೀರು ಕುಡಿಯಲು ನಿಂತಿತು. ಇದು ಊಸರವಳ್ಳಿ ಕೆಲಸಕ್ಕೆ ಅಡ್ಡಿ ಉಂಟುಮಾಡಿತು.
ಅದೇ ಸ್ಥಳದಲ್ಲಿ ನೀರಿನಡಿಯಲ್ಲಿ ಇದ್ದ ಹಾವು ಊಸರವಳ್ಳಿಗೆ ಏನು ಮಾಡುತ್ತಿರುವೆ ಎಂದು ಕೇಳಿತು. ಊಸರವಳ್ಳಿ ದೇವರು ಮನುಷ್ಯಕುಲಕ್ಕೆ ನೀಡಿರುವ ಉಡುಗೊರೆಯನ್ನು ತಾನು ತಲುಪಿಸುತ್ತಿರುವುದಾಗಿ ಹೇಳಿತು.

ಹಾವಿಗೆ ಮನುಷ್ಯರೆಂದರೆ ಇಷ್ಟವಿರಲಿಲ್ಲ, ಏಕೆಂದರೆ ಮನುಷ್ಯರು ಎತ್ತರವಾಗಿದ್ದರು ಮತ್ತು ಹಾವುಗಳನ್ನು ತುಳಿಯುತ್ತಿದ್ದರು. ಅಷ್ಟೇ ಅಲ್ಲದೇ ದೇವರು ಮನುಷ್ಯರಿಗೆ ನೀಡಿರುವ ಗಮನದ ಬಗ್ಗೆ ಮತ್ಸರವೂ ಹಾವಿಗೆ ಉಂಟಾಯಿತು. ಉಡುಗೊರೆ ಎಂದು ಹೇಳಿದಾಗ ಹಾವು ಯೋಜನೆ ಹೆಣೆಯಲು ಆರಂಭ ಮಾಡಿತು. ತಾನು ಮನುಷ್ಯರಿಗೆ ದೇವರು ನೀಡಿದ ಉಡುಗೊರೆಯನ್ನು ಪಡೆಯದಂತೆ ಮಾಡುವುದು ಹೇಗೆ ಎಂದು ಯೋಚಿಸಲು ಆರಂಭಿಸಿತು.

“ಓಹ್, ಪ್ರೀತಿಯ ಊಸರವಳ್ಳಿಯೇ” ಹಾವು ಹಿಸ್ ಎಂದು ಶಬ್ದ ಮಾಡುತ್ತ ಹೇಳಿತು. “ನಿನ್ನನ್ನು ನೋಡುತ್ತಿರುವುದು ಸಂತೋಷದ ವಿಷಯ! ನನ್ನ ಕುಟುಂಬವು ನೀನು ಇಲ್ಲದಿರುವುದರಿಂದ ಬಹಳ ಬೇಸರಪಡುತ್ತಿದೆ. ಇಂದು ಮಧ್ಯಾಹ್ನದ ಊಟಕ್ಕೆ ನೀನು ಏಕೆ ಬರಬಾರದು?” ಎಂದು ಹೇಳಿತು. ಸೂರ್ಯ ನೆತ್ತಿಯ ಮೇಲೆ ಬಂದಿರುವುದನ್ನು ಗಮನಿಸಿದ ಊಸರವಳ್ಳಿಯು ತಾನು ಹಾವಿನ ಮನೆಯಲ್ಲಿ ಮಧ್ಯಾಹ್ನ ಊಟ ಮಾಡಬಹುದು ಮತ್ತು ಹೇಗೆಂದರೂ ಪೊಟ್ಟಣ ನೀಡುವುದಕ್ಕೆ ಸಾಕಷ್ಟು ಸಮಯವಿದೆ ಎಂದು ತೀರ್ಮಾನಿಸಿತು. ಹಾಗಾಗಿ ಹಾವಿನ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡುವುದಕ್ಕೆ ಒಪ್ಪಿತು ಮತ್ತು ಹಾವಿನ ಹುತ್ತದೊಳಕ್ಕೆ ಹಾವಿನೊಂದಿಗೆ ಪ್ರವೇಶಿಸಿತು.

ಹಾವಿನ ಹೆಂಡತಿಯು ಭಾರೀ ಭೋಜನವನ್ನೇ ಸಿದ್ಧಪಡಿಸಿತ್ತು ಮತ್ತು ಊಸರವಳ್ಳಿಯು ಹಾವಿನೊಂದಿಗೆ ಬಂದಿರುವುದಕ್ಕೆ ಬಹಳ ಸಂತೋಷವನ್ನು ವ್ಯಕ್ತಪಡಿಸಿತು. ಇದು ಅತ್ಯಂತ ರುಚಿಕರವಾಗಿದ್ದರಿಂದ ಊಸರವಳ್ಳಿಯು ಹೆಚ್ಚು ಹೆಚ್ಚು ಊಟ ಮಾಡುವುದಕ್ಕೆ ಉತ್ತೇಜಿಸಿತು. ಗಡದ್ದಾಗಿ ಊಟ ಮಾಡಿದ ಊಸರವಳ್ಳಿಯು ತನಗೆ ವಹಿಸಿದ್ದ ಕೆಲಸವನ್ನು ಮರೆತು ನಿದ್ರೆ ಹೋಯಿತು.
ಹಾವು ಬುಸ್‌ಗುಟ್ಟುತ್ತಾ ನಿಧಾನವಾಗಿ ನಿದ್ರಿಸುತ್ತಿದ್ದ ಊಸರವಳ್ಳಿಯ ತೋಳಿನಲ್ಲಿದ್ದ ಪೊಟ್ಟಣ ಎತ್ತಿಕೊಂಡಿತು. ಇದನ್ನು ಕಂಡ ಹಾವಿನ ಹೆಂಡತಿ “ಏನದು” ಎಂದು ಕೇಳಿತು.

“ದೇವರು ನಮಗೆಂದು ನೀಡಿರುವ ಉಡುಗೊರೆ” ಎನ್ನುತ್ತಾ ಹಾವು ನಗತೊಡಗಿತು. ಜೊತೆಗೆ ಪೊಟ್ಟಣವನ್ನು ಬಿಡಿಸಿತು. “ನನ್ನ ಪ್ರೀತಿಯ ಹೆಂಡತಿಯೇ” ಎನ್ನುತ್ತಾ ಪೊಟ್ಟಣದೊಳಗಿರುವುದನ್ನು ಮೇಲೆತ್ತಿತು. ಅದು ಹೊಸ ಚರ್ಮ ಅಂದರೆ ಹಳೆಯ ಚರ್ಮದ ಬದಲು ಧರಿಸಲು ನೀಡಿದ ಹೊಸ ಚರ್ಮವಾಗಿದ್ದಿತು. “ ದೇವರು ನಮಗೆಂದು ಹೊಸ ಚರ್ಮಗಳನ್ನು ಕಳುಹಿಸಿದ್ದಾನೆ, ಇದರಿಂದ ನಾವು ಹಳೆಯ ಚರ್ಮ ಕಳಚಿ ಹೊಸ ಚರ್ಮ ಪಡೆಯಬಹುದು” ಎನ್ನುತ್ತಾ ದೊಡ್ಡದಾಗಿ ನಗತೊಡಗಿತು. ದೊಡ್ಡ ನಗುವಿನ ಶಬ್ದ ಕೇಳಿದ ಊಸರವಳ್ಳಿಗೆ ಎಚ್ಚರವಾಯಿತು ಮತ್ತು ಅದು ಏನಾಗುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಂಡಿತು.

“ಅದು ನಿನಗಲ್ಲ! ಅದು ಮನುಷ್ಯರಿಗಾಗಿ! ಹಿಂತಿರುಗಿ ನೀಡು” ಎಂದು ಊಸರವಳ್ಳಿ ವಿನಂತಿಸಿತು. ಆದರೆ ಹಾವು ಕೇವಲ ನಗುತ್ತಿತ್ತು, ಊಸರವಳ್ಳಿಯ ಕೈಗೆ ಚರ್ಮವು ಸಿಗದಂತೆ ದೂರ ಹಿಡಿದು ನಗುತ್ತಿತ್ತು.
ಊಸರವಳ್ಳಿಗೆ ಬೇಸರವೆನಿಸಿತು ಮತ್ತು ತಾನು ಮೋಸಹೋದ ರೀತಿಗೆ ದುಃಖವಾಯಿತು ಮತ್ತು ತಾನ ದೇವರನ್ನು ಆದೇಶ ಪಾಲಿಸಲು ವಿಫಲವಾದುದನ್ನು ಕಂಡು ನೋವಾಯಿತು. ಅದು ಮರಗಳ ನಡುವೆ, ರೆಂಬೆಯಿಂದ ರೆಂಬೆಗೆ ನೆಗೆಯುತ್ತ, ಜೊತೆಗೆ ಮರದ ತೊಗಟೆ ಹಾಗೂ ಎಲೆಗಳಿಗೆ ಸರಿಹೊಂದುವಂತೆ ದೇಹದ ಬಣ್ಣ ಬದಲಾಯಿಸಿಕೊಳ್ಳುತ್ತ ಮರೆಯಲ್ಲಿ ಉಳಿಯತೊಡಗಿತು ಮತ್ತು ತಾನು ಕಾಣದಂತೆ ಉಳಿಯಲು ಯತ್ನಿಸಿತು. ಅದು ಅವಮಾನದಿಂದ ತನ್ನ ಮುಖವನ್ನು ಯಾರಿಗೂ ತೋರಿಸುವುದಕ್ಕೆ ಬಯಸಲಿಲ್ಲ.

ಇಂದೂ ಕೂಡ ಇದರಿಂದಾಗಿ ಹಾವುಗಳು ವಯಸ್ಸಾಯಿತೆಂದು ಅನ್ನಿಸಿದಾಗಲೆಲ್ಲ ತಮ್ಮ ಮೊದಲ ಪೊರೆ ಕಳಚಿ ಹೊಸ ಚರ್ಮ ಪಡೆಯುತ್ತವೆ. ಊಸರವಳ್ಳಿಗಳು ಮರೆಯಲ್ಲಿಯೇ ಉಳಿಯಲು ಅಡಗಿಕೊಂಡಿರುತ್ತವೆ ಮತ್ತು ತಮ್ಮ ಚರ್ಮದ ಬಣ್ಣವನ್ನು ಬದಲಾಯಿಸುತ್ತವೆ.

Enjoyed this story?
Find out more here