ಶಾಪ
A free resource from
KidsOut - the fun and happiness charity
This story is available in:
This story is available in:
ಪೋರ್ಚುಗೀಸ್ ಕಥೆ

*
ಒಂದಾನೊಂದು ಕಾಲದಲ್ಲಿ ಬಹಳ ಹಿಂದೆ, ದೊಡ್ಡ ಕಾಡಿನ ಅಂಚಿನಲ್ಲಿ ಪುಟ್ಟ ಹಳ್ಳಿಯೊಂದು ಇತ್ತು.ಇದು ಬಹುತೇಕ ಶಾಂತಿಯುತ ಗ್ರಾಮವಾಗಿತ್ತು, ಆದರೆ ಗ್ರಾಮಸ್ಥರು ಲೊಬಿಜಾನ್ ಭಯದಲ್ಲಿ ವಾಸಿಸುತ್ತಿದ್ದರು. ಲೊಬಿಜಾನ್ ದಟ್ಟ ಕಾಡಿನ ಒಳಗೆ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಲೊಬಿಜಾನ್‌ಗಳು ಕಪ್ಪು ಜೀವಿಗಳು, ಅವು ಅರ್ಧ ಮನುಷ್ಯ ಮತ್ತು ಅರ್ಧ ತೋಳದ ಜೀವಿಗಳು ಮತ್ತು ಪ್ರತಿ ಹುಣ್ಣಿಮೆಯ ದಿನ ಈ ಜೀವಿಗಳು ಮಾನವನ ಮಾಂಸವನ್ನು ಹುಡುಕಿಕೊಂಡು ಕಾಡಿನಿಂದ ತೆವಳಿಕೊಂಡು ಬರುತ್ತವೆ ಎಂದು ಹೇಳಲಾಗುತ್ತದೆ.
ಆದರೆ ಇಂಥಹ ಜೀವಿ ಹೇಗೆ ಅಸ್ತಿತ್ವಕ್ಕೆ ಬಂತು? ಇದಕ್ಕೆ ಉತ್ತರ ಸರಳವಾಗಿದೆ. ಯಾವುದೇ ಕುಟುಂಬದಲ್ಲಿ ಹುಟ್ಟುವ ಏಳನೇ ಗಂಡುಮಗುವಿನ ಮೇಲಿನ ಶಾಪವಿದು. ಈ ಶಾಪವು ಹೆಣ್ಣು ಮಕ್ಕಳನ್ನು ಬಾಧಿಸುವುದಿಲ್ಲ. ಒಂದು ತಾಯಿ ಏಳು ಗಂಡು ಮಕ್ಕಳನ್ನು ಹೆತ್ತಾಗ, ಕೊನೆಯ ಮಗ ಖಚಿತವಾಗಿ ಲೊಬಿಜಾನ್ ಆಗುತ್ತಾನೆ.
ಫಿಲಿಪೆ ಹುಟ್ಟಿದಾಗ ಅವನ ತಾಯಿ ಹೆದರುತ್ತಿದ್ದಳು. ಅವಳು ಏಳನೇ ಮಗುವನ್ನು ಮಗನಲ್ಲ, ಮಗಳನ್ನು ನಿರೀಕ್ಷಿಸಿದ್ದಳು, ಆದರೆ ಫಿಲಿಪೆ ತಾಯಿಯು ದಯಾಮಯಿ ಮತ್ತು ಪ್ರೀತಿಯುಳ್ಳವಳಾಗಿದ್ದಳು. ಶಾಪದ ಬಗ್ಗೆ ಗ್ರಾಮಸ್ಥರು ಏನೇ ಹೇಳಿದರೂ, ಅವಳು ತನ್ನ ಸ್ವಂತ ಮಗುವಿಗೆ ಬೆನ್ನು ತಿರುಗಿಸಲು ಹೋಗುತ್ತಿರಲಿಲ್ಲ.
ಅನೇಕ ವರ್ಷಗಳು ಶಾಂತಿಯುತವಾಗಿ ಕಳೆದವು. ಫಿಲಿಪೆ ತನ್ನ ತಾಯಿ ಮತ್ತು ತಂದೆ ಮತ್ತು ಆರು ಸಹೋದರರಿಂದ ಹೆಚ್ಚು ಪ್ರೀತಿಸಲ್ಪಟ್ಟ ಬಲವಾದ ಹುಡುಗನಾಗಿ ಬೆಳೆದನು. ಆದರೆ ತನ್ನ ಸಹೋದರರಿಗಿಂತ ಭಿನ್ನವಾಗಿ ಪರಿಗಣಿಸುವುದನ್ನು ಗಮನಿಸದೇ ಇರಲು ಫಿಲಿಪೆಗೆ ಸಾಧ್ಯವಾಗಲಿಲ್ಲ. ಶಿಕ್ಷಕರು ಶಾಲೆಗೆ ಸೇರಿಸಿಕೊಳ್ಳದ ಕಾರಣ ಅವನು ಶಾಲೆಗೆ ಹೋಗಲಿಲ್ಲ. ಇದು ನ್ಯಾಯೋಚಿತವಲ್ಲ ಏಕೆಂದರೆ ಚಿಕ್ಕ ಹುಡುಗ ಹೊಸ ವಿಷಯಗಳನ್ನು ಕಲಿಯಲು ಇಷ್ಟ ಪಟ್ಟಿದ್ದನು ಮತ್ತು ಇತರೆ ಮಕ್ಕಳೊಂದಿಗೆ ಕೂಡಿ ಸ್ನೇಹ ಬೆಳೆಸಲು ವಿಪರೀತ ಬಯಸಿದ್ದನು.
ಯಾವಾಗಲಾದರೂ ಫಿಲಿಪೆಯನ್ನು ಅವನ ತಾಯಿ ರೊಟ್ಟಿ ತರಲು ಕಳುಹಿಸಿದರೆ, ಹಳ್ಳಿಯ ಜನರು ಅವನ ಹಾದಿಯನ್ನು ಎಂದಿಗೂ ದಾಟುತ್ತಿರಲ್ಲಿಲ್ಲ ಮತ್ತು ಅವನನ್ನು ಭಯ ಮತ್ತು ಅಸಮಾಧಾನದಿಂದ ನೋಡುತ್ತಿದ್ದರು, ಇದು ಚಿಕ್ಕ ಹುಡುಗನನ್ನು ಹೆದರಿಸಿತು. ಇತರೆ ಮಕ್ಕಳು ಆತನೊಂದಿಗೆ ಆಡುತ್ತಿರಲಿಲ್ಲ ಮತ್ತು ಹುಣ್ಣಿಮೆಯಂದು ಇವನಿಗೆ ತೋಟಕ್ಕೆ ಬಿಡುತ್ತಿರಲಿಲ್ಲ.
ಅದೆಲ್ಲಕಿಂತ ಅತ್ಯಂತ ಕೆಟ್ಟ ಕೊನೆಯ ಅಂಶವೆಂದರೆ ಫಿಲಿಪೆ ಚಂದ್ರನನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದ. ಆಕಾಶದಲ್ಲಿ ರಾತ್ರಿ ಚಂದ್ರ ಪೂರ್ಣವಾಗಿ ಮತ್ತು ದುಂಡಗೆ ಇದ್ದಾಗ ಫಿಲಿಪೆ ಅದರೊಂದಿಗೆ ಮಾತನಾಡುತ್ತಿದ್ದ. ಅವನ ಉತ್ಸಾಹ ಇನ್ನಷ್ಟು ಹೆಚ್ಚುತ್ತಿತ್ತು ಮತ್ತು ಅದು ಅವನಿಗೆ ಹಾಡಲು, ನೃತ್ಯ ಮಾಡಲು ಮತ್ತು ಓಡುವಂತೆ ಪ್ರೇರೇಪಿಸುತ್ತಿತ್ತು.
ಜೀವನವು ಶಾಂತಿಮಯವಾಗಿದ್ದರೂ, ಸಂತೋಷದಿಂದ ಬಹಳ ದೂರದಲ್ಲಿತ್ತು. ಒಂದೊಂದು ವರ್ಷ ಕಳೆದಂತೆ ಫಿಲಿಪೆ ಹೆಚ್ಚೆಚ್ಚು ಏಕಾಂತದಲ್ಲಿ ಇರುವಂತಾಯಿತು. ಅವನಿಗೆ ಸ್ನೇಹಿತರೇ ಇರಲಿಲ್ಲ ಮತ್ತು ಇತರ ಮಕ್ಕಳಾರೂ ಅವನನ್ನು ಒಂದು ಬಾರಿಯೂ ಆಟವಾಡಲು ಆಹ್ವಾನಿಸುತ್ತಿರಲಿಲ್ಲ. ಹಲವು ಬಾರಿ ಅವನು ಇತರ ಮಕ್ಕಳ ನಗುವನ್ನು ಕೇಳುತ್ತಿದ್ದ ಮತ್ತು ಅವರೆಲ್ಲರೂ ಯಾವ ಆಟ ಆಡುತ್ತಿರಬಹುದು ಮತ್ತು ಅವರೆಲ್ಲರು ಎಷ್ಟು ಮೋಜು ಮಾಡುತ್ತಿರಬಹುದು ಎಂದು ತನ್ನಷ್ಟಕ್ಕೆ ತಾನೇ ಊಹಿಸುತ್ತಿದ್ದ.
ಅವನ ತಾಯಿ ಮತ್ತು ಸಹೋದರರು ಸಹ ತನ್ನನ್ನು ವಿಚಿತ್ರವಾಗಿ ನೋಡಲು ಆರಂಭಿಸಿದ್ದಾರೆ ಎಂದು ಫಿಲಿಪೆ ಗಮನಿಸಿದನು.
‘ನನ್ನಲ್ಲಿ ಅಂಥದ್ದೇನು ತಪ್ಪೇನಿದೆ?’ 'ನಾನು ಅಷ್ಟು ಕೆಟ್ಟ ಹುಡುಗನಲ್ಲ. ನಾನು ನನ್ನ ಮನೆ ಕೆಲಸಗಳೆಲ್ಲ ಮಾಡಿಕೊಳ್ಳುತ್ತೇನೆ ಮತ್ತು ನಾನು ಎಂದಿಗೂ ಅಸಭ್ಯವಾಗಿ ವರ್ತಿಸಿಲ್ಲ. ಆದರೂ ನನ್ನನ್ನು ಇತರ ಮಕ್ಕಳಿಗಿಂತ ಏಕೆ ವಿಭಿನ್ನವಾಗಿ ಪರಿಗಣಿಸಲಾಗಿದೆ? ಎಂದು ಫಿಲಿಪೆ ಆಗಾಗ್ಗೆ ತನ್ನನ್ನು ತಾನೇ ಕೇಳಿಕೊಳ್ಳುತ್ತಿದ್ದ.
ಫಿಲಿಪೆ ತನ್ನ ಹದಿನೈದನೇ ಹುಟ್ಟುಹಬ್ಬ ಸಮೀಪಿಸುತ್ತಿದ್ದಂತೆ, ಆತ ಎಂದಿಗಿಂತಲೂ ದುಃಖಿತನಾಗತೊಡಗಿದ.
ಅವನ ತಾಯಿ ಅವನನ್ನು ಮನೆಯಿಂದ ಹೊರಗೆ ಬಿಡುವುದು ಅಪರೂಪವಾಗತೊಡಗಿತು ಮತ್ತು ಹಲವು ಬಾರಿ ಆಕೆ ಅವನ ಜೊತೆ ಒಡನಾಟದಲ್ಲಿ ಇದ್ದಾಗ ಅವನು ಉದ್ರೇಕಗೊಂಡಂತೆ ಕಾಣುತ್ತಿದ್ದಳು. ಅವನು ತನ್ನ ಮನೆಯ ಪಕ್ಕದಲ್ಲಿಯೇ ಸ್ವಂತವಾಗಿ ಆಟ ಆಡುವುದನ್ನು ನೋಡಿದರೆ ಸಾಮಾನ್ಯ ಮಕ್ಕಳು ಅವನ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದರು, ಆದರೆ ಅವನು ಅವರ ವಿರುದ್ಧ ಪ್ರತಿಭಟಿಸಿದರೆ ಅವರು ರಾಕ್ಷಸರ ಹಾಗೆ ಕಿರುಚುತ್ತಾ ಓಡಿ ಹೋಗುತ್ತಿದ್ದರು. ಕೆಲವೊಮ್ಮೆ ಫಿಲಿಪೆ ದಟ್ಟ ಕಾಡಿನ ಪ್ರದೇಶದಲ್ಲಿ ತಪ್ಪಿಸಿಕೊಳ್ಳಲು ಮತ್ತು ಎಂದಿಗೂ ಹಿಂದಿರುಗಿ ಬರದಿರುವಂತೆ ಹಾತೊರೆಯುತ್ತಿದ್ದನು.
ಒಂದು ದಿನ ಅವನ ತಾಯಿ ಅವನನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವನ ಕಷ್ಟಗಳಿಗೆ ಕಾರಣವನ್ನು ವಿವರಿಸಿದಳು. 'ನೀನು ನನ್ನ ಏಳನೆಯ ಮಗ, ನಿನ್ನ ಮೇಲೆ ಶಾಪವಿದೆ, ನನ್ನ ಮಗು' ಎಂದಳು.
ಫಿಲಿಪೆ ತುಂಬಾ ಗಲಿಬಿಲಿಗೊಂಡು. 'ಯಾವ ರೀತಿಯ ಶಾಪ?' ಎಂದು ಅವಳನ್ನು ಕೇಳಿದ..’
'ನಿನ್ನ ಹದಿನೈದನೇ ಹುಟ್ಟುಹಬ್ಬದಂದು ನೀನು ಲೋಬಿಜಾನ್ ಆಗಿ ಬದಲಾಗುವೆ, ಅದು ಅರ್ಧ ಮನುಷ್ಯ ಮತ್ತು ಅರ್ಧ ತೋಳದಂತಿರುವ ಜೀವಿ’ಎಂದಳು.
ತನ್ನ ಪುಸ್ತಕಗಳಿಂದ ಮತ್ತು ಅವನ ಸಹೋದರರು ರಾತ್ರಿ ಫಿಲಿಪೆ ತನ್ನ ಹಾಸಿಗೆಯಲ್ಲಿ ನಿದ್ರಿಸಿದ್ದಾನೆ ಎಂದು ಭಾವಿಸಿ ಈ ಕಥೆಗಳನ್ನು ಹಂಚಿಕೊಂಡಿದ್ದರಿಂದ ಲೋಬಿಜಾನ್ ಕುರಿತು ಈಗಾಗಲೇ ಫಿಲಿಪೆ ತಿಳಿದುಕೊಂಡಿದ್ದನು.
ಆದರೆ ಫಿಲಿಪೆ ಈ ರೀತಿಯ ಶಾಪಗ್ರಸ್ತನಾಗಿದ್ದಾನೆಂದು ಅವರು ಅವನಿಗೆ ಎಂದಿಗೂ ಹೇಳಿರಲಿಲ್ಲ. ಅವನು ಲೋಬಿಜಾನ್ ಆಗಲು ಬಯಸಲಿಲ್ಲ. ಅವನು ದುಷ್ಟ ಅಥವಾ ಕ್ರೂರಿಯಾಗಲು ಬಯಸಲಿಲ್ಲ ಮತ್ತು ಅವನ ದೇಹದಾದ್ಯಂತ ದಪ್ಪ ತುಪ್ಪಳವನ್ನು ಮತ್ತು ಉದ್ದವಾದ ಉಗುರುಗಳನ್ನು ಹೊಂದುವ ಬಗೆಗೆ ಖಚಿತವಾದ ಕಲ್ಪನೆ ಇರಲಿಲ್ಲ.
ತನ್ನ ಹದಿನೈದನೇ ಹುಟ್ಟುಹಬ್ಬದ ಮುನ್ನಾ ದಿನದಂದು, ಯುವ ಫಿಲಿಪೆ ತನ್ನ ಇಡೀ ಜೀವನದಲ್ಲಿ ಹಿಂದೆಂದಿಗಿಂತಲೂ ದುಃಖಿತನಾಗಿದ್ದನು. ಅವನು ಕತ್ತಲೆಯಲ್ಲಿ ಹಾಸಿಗೆಯಲ್ಲಿ ಎದ್ದು ಕುಳಿತು ತನ್ನಷ್ಟಕ್ಕೇ ತಾನು ಅಳುತ್ತಿದ್ದನು. 'ನಾನು ಒಬ್ಬಂಟಿಯಾಗಿದ್ದೇನೆ', 'ನನ್ನನ್ನು ಯಾವಾಗಲೂ ವಿಭಿನ್ನವಾಗಿ ಪರಿಗಣಿಸಲಾಗಿದೆ. ಮತ್ತು ಈಗ ನಾನು ಲೋಬಿಜಾನ್ ಆಗಲು ಶಾಪಗ್ರಸ್ತನಾಗಿದ್ದೇನೆ. ನಾನು ಏನು ಮಾಡಲಿ? ಎಲ್ಲರಂತೆಯೇ ಇರಬೇಕೆಂದು ನಾನು ಬಯಸಿದ್ದೆ. ಸ್ನೇಹಿತರೊಂದಿಗೆ ಕಾಡಿನಲ್ಲಿ ಆಟವಾಡುವುದು ಮತ್ತು ರಾತ್ರಿಯಲ್ಲಿ ಸುಂದರವಾದ ಚಂದ್ರನನ್ನು ಮೆಚ್ಚುವುದು ಮಾತ್ರ ನನಗೆ ಬೇಕಾಗಿತ್ತು.’ ಎಂದು ಆಲೋಚಿಸಿದನು.
ಅಷ್ಟರಲ್ಲೇ ಫಿಲಿಪೆ ತನ್ನ ಮಲಗುವ ಕೋಣೆಯ ಕಿಟಕಿಯಿಂದ ಹೊರಗಡೆ ನೋಡಿದನು ಮತ್ತು ನಕ್ಷತ್ರಗಳಿಂದ ತುಂಬಿರುವ ಕಪ್ಪು ನೀಲಿ ಆಕಾಶದಲ್ಲಿ ಚಂದ್ರ ಉದಯಿಸುತ್ತಿರುವುದನ್ನು ಗಮನಿಸಿದ.ಅದು ದೊಡ್ಡ ಸುಂದರ ಹುಣ್ಣಿಮೆ ಮತ್ತು ಅವನ ಅಂತರಾಳ ಸಂತೋಷದಿಂದ ತುಂಬಿತು. ಬಳಿಕ ಬಹಳ ವಿಚಿತ್ರ ಸಂಗತಿಯೊಂದು ಸಂಭವಿಸಿತ್ತು: ಫಿಲಿಪೆಗೆ ತನ್ನ ಹೊಟ್ಟೆಯಲ್ಲಿ ಕಲಕುವಿಕೆ ಮತ್ತು ಚರ್ಮದ ಮೇಲೆಲ್ಲಾ ತುರಿಕೆಯ ಅನುಭವವಾಯಿತು. ಅವನ ಎದೆಯಿಂದ ಕಿರುಚುವ ಶಬ್ದ ಕೇಳಿಸಿತು ಮತ್ತು ಅವನು ತನ್ನ ತಲೆಯನ್ನು ಚಂದ್ರನ ಕಡೆಗೆ ತಿರುಗಿಸಿ ಹಿಂದೆಂದೂ ಮಾಡದ ರೀತಿಯಲ್ಲಿ ಅವಳನ್ನು ಕರೆದನು.
ಅವನ ದೇಹದಲ್ಲಿ ಇದ್ದಕ್ಕಿದ್ದಂತೆ ತುಪ್ಪಳಗಳ ಮೊಳಕೆಯೊಡೆಯಿತು ಮತ್ತು ಅವನ ಕೈಗಳ ಮತ್ತು ಕಾಲುಗಳಲ್ಲಿ ಉದ್ದನೇಯ ದಂತದ ಬಣ್ಣದ ಉಗುರುಗಳು ಮೂಡಿದವು. ಅವನ ಬಟ್ಟೆಗಳು ಚೂರುಚೂರಾಗಿ ಅವನ ಪಾದದ ಅಡಿಯಲ್ಲಿ ನೆಲಕ್ಕೆ ಬಿದ್ದವು. ಫಿಲಿಪೆ ಕನ್ನಡಿಯನ್ನು ನೋಡಿದಾಗ, ದೇಹದಾದ್ಯಂತ ದಪ್ಪ ತುಪ್ಪಳ ಮತ್ತು ಕತ್ತಲೆಯಲ್ಲಿ ಹೊಳೆಯುವಂತೆ ಕಡು ಕೆಂಪು ಕಣ್ಣುಗಳೊಂದಿಗೆ ಅವನತ್ತ ನೋಡುತ್ತಿರುವ ಎತ್ತರದ ತೋಳ-ಹುಡುಗ ತನ್ನನ್ನೇ ದಿಟ್ಟಿಸುತ್ತಿರುವ ಹಾಗೆ ಅವನು ಪ್ರತಿಬಿಂಬವನ್ನು ನೋಡಿದ.
‘ಆದ್ದರಿಂದಲೇ ನಾನು ಲೋಬಿಜಾನ್!’ ಅವನು ಉದ್ಗರಿಸಿದ.
ಚಂದ್ರ ಮತ್ತು ಕಾಡು ತನ್ನನ್ನು ಕರೆಯುತ್ತಿರುವಂತೆ ಫಿಲಿಪೆ ಭಾಸಗೊಂಡನು. ಮತ್ತು ತನ್ನ ಹಳೆಯ ಜೀವನದಿಂದ ಸರಿದು ತನ್ನ ಹಣೆಬರಹವನ್ನು ಸ್ವೀಕರಿಸಿರುವ ಕಾಲ ಬಂದಿದೆಯೆಂದು ಅರಿತುಕೊಂಡ.
ಯುವ ತೋಳ-ಹುಡುಗ ತನ್ನ ಮಲಗುವ ಕೋಣೆಯಲ್ಲಿ ಕಿಟಕಿಯನ್ನು ತೆರೆದ. ರಾತ್ರಿ ಹೊರಡುವ ಮೊದಲು ಕೊನೆಯ ಬಾರಿ ಒಮ್ಮೆ ತನ್ನ ಮಲಗುವ ಹಳೆ ಕೋಣೆ ನೋಡಿದನು ಮತ್ತು ತನ್ನ ತಾಯಿ ತಂದೆ ಮತ್ತು ಅವನ ಆರು ಸಹೋದರರನ್ನು ಯೋಚಿಸಿದ. 'ನನ್ನ ಪ್ರೀತಿಯ ಕುಟುಂಬ, ನಾನು ಯಾವಾಗಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ, ಆದರೆ ಈಗ ನಾನು ಯಾರೆಂದು ಒಪ್ಪಿಕೊಳ್ಳಲೇಬೇಕು ಮತ್ತು ಹೊಸ ಜೀವನ ಆರಂಭಿಸಬೇಕು' ಎಂದುಕೊಂಡ.
ನಂತರ ಅವನು ತನ್ನದೇ ಮಲಗುವ ಕೋಣೆಯ ಕಿಟಕಿಯಿಂದ ಜಿಗಿದ ಮತ್ತು ಸದಾ ಚಂದ್ರನನ್ನು ನೋಡುತ್ತಾ ಕೂಗುತ್ತಾ ಕಾಡಿಗೆ ಓಡಿದನು, ಅವನ ಹೃದಯದಲ್ಲಿ ಭವಿಷ್ಯದ ಬಗ್ಗೆ ವಿಚಿತ್ರವಾದ ಹೊಸ ಭರವಸೆಯೊಂದು ತುಂಬಿತ್ತು.
ಫಿಲಿಪೆ ಅತ್ಯಂತ ದಟ್ಟ ಕಾಡು ಪ್ರದೇಶದ ಒಳಗಿದ್ದಾಗ, ಅವನು ಸುಂದರವಾದ ಬಯಲಿನಲ್ಲಿ ನಿಂತ ಮತ್ತು ಹಳೆಯ ಮರಗಳನ್ನು ಮತ್ತು ಆಕಾಶದಲ್ಲಿ ಎತ್ತರಕ್ಕೆ ಸುಂದರವಾಗಿರುವ ಚಂದ್ರನನ್ನು ನೋಡಿದನು. ಅವನು ಕೂಗುತ್ತಾ ಮತ್ತು ಕಿರುಚುತ್ತಾ, ಜಿಗಿದು, ನರ್ತಿಸಿ, ನಕ್ಕನು... ಮತ್ತು ಕೊನೆಯಲ್ಲಿ ಅವನು ಕಿರುಚುವುದನ್ನು ಮತ್ತು ನೃತ್ಯ ಮಾಡುವುದನ್ನು ನಿಲ್ಲಿಸಿದ, ಸುತ್ತಲೂ ನೋಡಿದನು ಮತ್ತು ಇತರೆ ಲೋಬಿಜಾನ್ ಗಳು ಖಾಲಿ ಪ್ರದೇಶದಲ್ಲಿ ಜಮಾಯಿಸಿರುವುದನ್ನು ಗಮನಿಸಿದನು. ಕೆಲವರು ಫಿಲಿಪೆಯಂತೆ ಚಿಕ್ಕವರು, ಕೆಲವರು ಹಿರಿಯರು.
ಅವರು ಫಿಲಿಪೆ ಬಳಿ ಬಂದು ಸ್ವಾಗತಿಸಿದರು.
‘ನೀನೀಗ ಸ್ನೇಹಿತರ ನಡುವೆ ದೊಡ್ಡ ಅರಣ್ಯ ಪ್ರದೇಶದ ಮನೆಯಲ್ಲಿದ್ದೀಯ,’ ಎಂದು ದಯಾಮಯ ಮತ್ತು ಸೌಮ್ಯವಾದ ಧ್ವನಿಯಲ್ಲಿ ಒಬ್ಬ ಹೇಳಿದ. ಆಗಲೇ ಫಿಲಿಪೆಗೆ ತಾನು ಶಾಪಗ್ರಸ್ತನಲ್ಲ ಎಂದು ಅರಿವಾಯಿತು.
'ನಾನು ಲಾಬಿಜಾನ್ ಮತ್ತು ನಾನು ಮನೆಯಲ್ಲಿದ್ದೇನೆ!' ಹುಣ್ಣಿಮೆಯ ಚಂದ್ರನತ್ತ ತಲೆಯೆತ್ತಿ ತನ್ನೆಲ್ಲ ಶಕ್ತಿಯಿಂದ ಮುಗುಳ್ನಗೆಯೊಂದಿಗೆ ಹೇಳಿದ. ಇತರೆ ಲಾಬಿಜಾನ್ ಎಲ್ಲರೂ ಸೇರಿ ಚಂದ್ರನಿಗೆ ಗೌರವಾರ್ಥವಾಗಿ ರಾತ್ರಿ ಆಕಾಶಕ್ಕೆ ಗೀತಮೇಳವನ್ನು ಅರ್ಪಿಸಿದರು.
ಅನೇಕ ಮೈಲಿಗಳಷ್ಟು ದೂರ, ಫಿಲಿಪೆಯ ತಾಯಿ ತನ್ನ ತೋಟದಲ್ಲಿ ನಿಲುವಂಗಿ ಧರಿಸಿ ನಿಂತಿದ್ದಳು ಮತ್ತು ದೊಡ್ಡದಾದ ಕಾಡಿನ ಒಳಗಿನಿಂದ ಗಾಳಿಯಲ್ಲಿ ತೇಲುತ್ತಿರುವ ಲೋಬಿಜಾನ್ ಗಳ ಮೃದುವಾದ ಮೇಳ ಗೀತೆಯನ್ನು ಕೇಳಿದಳು. ತನ್ನ ಮಗ ಅಂತಿಮವಾಗಿ ತನ್ನನ್ನು ಆದರಿಸುವ ಮನೆಯನ್ನು ಕಂಡುಕೊಂಡಿದ್ದಾನೆ ಮತ್ತು ಅವನು ಅನೇಕ ಸ್ನೇಹಿತರನ್ನು ಹೊಂದಿ ಸುದೀರ್ಘ ಕಾಲ ಸಂತೋಷದಾಯಕ ಜೀವನವನ್ನು ನಡೆಸುತ್ತಾನೆ ಎಂದು ಅರಿತ ವೃದ್ದ ಮಹಿಳೆ ತನ್ನಷ್ಟಕ್ಕೆ ತಾನೇ ಮುಗುಳ್ನಕ್ಕಳು.
Enjoyed this story?